K2kannadanews.in
Crime News ಕಲಬುರಗಿ : ಮಗುವನ್ನು ಶಾಲೆಗೆ ಕಳುಹಿಸಲು ಹೋದ ವೇಳೆ ರಸ್ತೆಯಗೆ ಇಳಿಯುತ್ತಿದ್ದಂತೆ ಕರೆಂಟ್ ಶಾಕ್ ತಗುಲಿ ತಾಯಿ-ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯಲ್ಲಿ ನಡೆದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಹೌದು ಕಲಬುರ್ಗಿ ನಗರದಲ್ಲಿ ಘಟನೆ ನಡೆದಿದ್ದು ಮಗನಿಗೆ ಶಾಲಾ ಬಸ್ ಹತ್ತಲು ಸಹಾಯ ಮಾಡುತ್ತಿದ್ದ 34 ವರ್ಷದ ಮಹಿಳೆ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಈ ಒಂದು ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭಾಗ್ಯಶ್ರೀ ಎಂಬ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ. ಘಟನೆಯಲ್ಲಿ ಆಕೆಯ ಮಗನಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು ವೀಡಿಯೋದಲ್ಲಿ, ಭಾಗ್ಯಶ್ರೀ ತನ್ನ ಮಗನೊಂದಿಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವುದು ನೋಡಬಹುದು. ಬೆಳಿಗ್ಗೆ 9:21 ಕ್ಕೆ ಶಾಲಾ ಬಸ್ ಬರುತ್ತಿದ್ದಂತೆ, ತನ್ನ ಮಗನ ಜೊತೆ ಬಸ್ ಬಳಿ ಬಂದಿದ್ದಾಳೆ. ಮಗನನ್ನು ಬಸ್ ಹತ್ತಿಸಲು ಮುಂದಾಗುತ್ತಿದ್ದಂತೆ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಹಿನ್ನೆಲೆ, ಆಕೆಯ ದೇಹದಿಂದ ಕಿಡಿಗಳು ಬಂದು, ಕೆಳಗೆ ಕುಸಿದುಬಿದ್ದಿದ್ದಾಳೆ. ಜನರು ಸಹಾಯ ಮಾಡಲು ಪ್ರಯತ್ನಿಸಿದರೂ ಪ್ರಬಲ ಕಿಡಿಗಳು ಬರುತ್ತಿದ್ದಂತೆ ಹೆದರಿ ಹಿಂದೆ ಸರಿಯುತ್ತಾರೆ. ಬಳಿಕ ಭಾಗ್ಯಶ್ರೀ ಮತ್ತು ಅವರ ಮಗನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಮಹಿಳೆಯ ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಬಸ್ ನಿಲ್ದಾಣದ ಬಳಿ ನೇತಾಡುತ್ತಿದ್ದ ಲೈವ್ ವಿದ್ಯುತ್ ಕೇಬಲ್ ನಿಂದಾಗಿ ವಿದ್ಯುತ್ ಆಘಾತ ಸಂಭವಿಸಿದೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.