K2kannadanews.in
Health Tips ಆರೋಗ್ಯ ಭಾಗ್ಯ : ಬೆಳಗಿನ ಉಪಹಾರ ರಾಜನಂತಿರಬೇಕು, ರಾತ್ರಿ ಊಟ ಬಡವರಂತಿರಬೇಕು ಅನ್ನೋ ಮಾತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಆರೋಗ್ಯವಾಗಿರಬೆಕಾದ್ರೆ ಈ ಸೂತ್ರ ಅನುಸರಿಸಬೇಕು. ಕಾಲ ಬದಲಾದಂತೆ, ಜೀವನಶೈಲಿಯೂ ಬದಲಾವಣೆಯಾಗಿ, ಈಗ ರಾತ್ರಿ ಊಟ ಲಘುವಾಗಿರಬೇಕು ಎಂಬ ಕಲ್ಪನೆ ಬಂದಿದೆ. ಜೊತೆಗೆ ರಾತ್ರಿ ಊಟ ಯಾವಾಗ ಮಾಡಬೇಕು ಎಂಬ ಗೊಂದಲ ಹಲವರಲ್ಲಿದೆ. ಕೆಲವರು ರಾತ್ರಿ ಬೇಗ ಊಟ ಮಾಡಬೇಕು ಎಂದರೆ, ಇನ್ನೂ ಕೆಲವರು ಇದನ್ನು ವಿರೋಧಿಸುತ್ತಾರೆ. ಹಾಗಾದರೆ, ರಾತ್ರಿ ಊಟದ ಸಮಯ ಯಾವುದು ಎಂಬುದನ್ನು ನೋಡೋಣ.
ಬೆಳಗ್ಗಿನ ಉಪಹಾರವು ಉತ್ತಮ ಆರೋಗ್ಯವನ್ನು ಉತ್ತೇಜಿಸುವ ಅಗತ್ಯ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ನಂತರ ಮಧ್ಯಾಹ್ನದ ಊಟವು ಪ್ರತಿಯೊಬ್ಬರಿಗೂ ಒಂದು ಪ್ರಮುಖ ಊಟವಾಗಿದೆ, ಏಕೆಂದರೆ ಅದು ಶಕ್ತಿ ಮತ್ತು ಪೋಷಕಾಂಶಗಳ ಮೂಲವಾಗಿದ್ದು, ರಾತ್ರಿಯ ಊಟದವರೆಗೂ ದೇಹ ಮತ್ತು ಮೆದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆದರೆ, ರಾತ್ರಿ ಲಘು ಊಟವು ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ತಜ್ಞರು.
ರಾತ್ರಿಯ 7 ರಿಂದ 8 ಗಂಟೆಯ ಸಮಯದಲ್ಲಿ ಅಥವಾ ಸ್ವಲ್ಪ ಮುಂಚಿತವಾಗಿ ರಾತ್ರಿ ಊಟ ಸೇವನೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ನಾವು ದಿನವಿಡೀ ಸಕ್ರಿಯರಾಗಿರುವುದರಿಂದ, ಸಂಜೆಯ ವೇಳೆಗೆ ಸೇವಿಸಿರುವ ಬಹುತೇಕ ಕ್ಯಾಲೊರಿಗಳು ಸುಡುತ್ತವೆ. ಆದರೆ, ರಾತ್ರಿಯಲ್ಲಿ ಯಾವುದೇ ಚಟುವಟಿಕೆ ಮಾಡದಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ರಾತ್ರಿ ಅತಿಯಾಗಿ ಸೇವಿಸಿದ ಆಹಾರವು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತವೆ. ಆದ್ದರಿಂದ ಮಲಗುವ 2-3 ಗಂಟೆಗಳ ಒಳಗೆ ಆಹಾರ ಸೇವಿಸಿದರೆ, ಅದು ದೇಹದಲ್ಲಿ ಕೊಬ್ಬಿನಂತೆ ಶೇಖರಗೊಳ್ಳುತ್ತವೆ ಎಂಬುದನ್ನು ಗಮನದಲ್ಲಿಡಿ. ಆದ್ದರಿಂದ ರಾತ್ರಿಯ ಊಟವನ್ನು ಸಂಪೂರ್ಣವಾಗಿ ತ್ಯಜಿಸುವುದು ಅಥವಾ ರಾತ್ರಿಯ ಊಟದಲ್ಲಿ ಹೆಚ್ಚು ತಿನ್ನುವುದು ಎರಡೂ ಪ್ರಯೋಜನಕಾರಿಯಲ್ಲ.