K2kannadanews.in
Rain in channi ಚೆನ್ನೈ : ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಮಳೆಯಿಂದ ಅವಾಂತರಗಳು ಸಾಕಷ್ಟು ಸೃಷ್ಟಿಯಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಚೆನ್ನೈ ನಗರದ ಹಲವು ಪ್ರದೇಶಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಜನ ಸಾಮಾನ್ಯರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಹವಾಮಾನ ಮಾಹಿತಿಗಾಗಿ ‘ಟಿಎನ್ ಅಲರ್ಟ್ ಆಯಪ್’ ಚೆಕ್ ಮಾಡುವಂತೆಯೂ ಸರ್ಕಾರ ಸೂಚಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈವರೆಗೆ ವಿಮಾನಯಾನ, ರೈಲು ಸಂಚಾರ, ಮೆಟ್ರೊ ರೈಲು ಸಂಚಾರಕ್ಕೆ ತೊಂದರೆಯಾಗಿಲ್ಲ. ಮಳೆ ಬಾಧಿತ ಪ್ರದೇಶಗಳಿಗೆ ತೆರಳಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರಿಶೀಲನೆ ನಡೆಸಿದ್ದಾರೆ.
ಮಳೆಯಿಂದಾಗಿ ಸಂಭವನೀಯ ಎಲ್ಲ ಪರಿಸ್ಥಿತಿ ನಿಭಾಯಿಸಲು ಸಿದ್ಧವಿರುವಂತೆ ಸ್ಥಳೀಯ ಆಡಳಿತಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೂಚನೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ತಮಿಳುನಾಡು ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆಂಧ್ರ ಪ್ರದೇಶದ ಕರಾವಳಿ ಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಕೇರಳ ಹಾಗೂ ಮಾಹೆ ಪ್ರದೇಶಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇವತ್ತು ಮಹಾಮಳೆಯಿಂದ ಈಗಾಗಲೇ ಚೆನ್ನೈನ ಹಲವು ಪ್ರದೇಶಗಳಿಗೆ ಜಲದಿಗ್ಬಂದನ ಎದುರಾಗಿದೆ ಇನ್ನೊಂದು ಕಡೆ ಭಾರಿ ಗುಡುಗು ಸಹಿತ ಮಳೆ ಆಗುತ್ತದೆ. ಗುಡುಗು ಸಿಡಿಲಿನ ನಡುವೆ ಮಿಂಚು ಬೀಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.